ಗಾಂಧಾರಿಯ ಗರ್ಭ ಬಾಡಿಗೆಗೆ ಸಿಕ್ಕಂತಿದೆ

ಚಾಚಿದಷ್ಟೂ ಮಿಥ್ಯ ಪಾದಗಳೇ
ಜೋಡು ಅಲೆಗಳು
ಚದುರುತ್ತಲೇ ಗುರಿ ಅನತಿ ದೂರ,
ನೆತ್ತಿಗೆ ಕಾಲು ಹುಟ್ಟಿವೆ
ಗಾಂಧಾರಿಯ ಗರ್ಭ ಬಾಡಿಗೆಗೆ 
ಸಿಕ್ಕಿದಂತಿದೆ,
ಉಳಿವವೆಷ್ಟೋ, ಬಲಿವವೆಷ್ಟೋ

ಹಾಯಿದೋಣಿಯ
ನೆನಪಿನಲ್ಲೂ ಜಾಗ ಸಿಕ್ಕಲಿಲ್ಲ,
ಆಕ್ರೋಶಕ್ಕೆ ಪೊರೆ ಬಿಡಬೇಕು
ಮುಳ್ಳು ಬೇಲಿ ಹುಡುಕುವಾಗ
ಸಿಕ್ಕದ್ದು ಮೋಡ ತುಂಬಿದ
ಕಪ್ಪ ಬಣ್ಣದಾಗಸ,
ತೆರಚಿದ ಗಾಯಗಳನ್ನು
ತೆರೆದಿಟ್ಟರೆ
ವಿಕೃತ ಮನಸ್ಸು,

ಅದೆಷ್ಟು ಯೋನಿಗಳು
ಅದೆಷ್ಟು ಪ್ರಸವಗಳು
ಕರುಳು ಬಳ್ಳಿಯಿಂದ ಜೀಕುವ ರಕುತಕ್ಕೆ
ಬಣ್ಣ ಅಂಟುವುದೇ ಇಲ್ಲ,
ಬೆಳ್ಳಗಿದ್ದ ರಗ್ಗು; ಇಂಚು ಇಂಚಾಗಿ
ಕರಗೀತೆ ಹೊರತು
ಕೆಂಪುಗಟ್ಟಲೇ ಇಲ್ಲ
ಇನ್ನೆಲ್ಲಿಯ ಮೈಲಿಗೆಯ ಮಾತು!

ದಿನ ದಿನವೂ ತಣ್ಣಗಾಗುತ್ತಲೇ ಹೋಗುವ
ದೇಹದಲ್ಲಿ ನಾಡಿಗಳಿಲ್ಲ,
ಹಾಗೆ ಬಡಿವಾರದ ಮುಖಗಳೂ ಇಲ್ಲ,
ಸಾವುಗಳೆಡೆಗೆ ತಾಟಗಿತ್ತಿಯ
ನಗೂ ಸಹ ನಗುವುದಿಲ್ಲ,
ನಿರ್ವಿಕಾರದ ಹುಟ್ಟು
ನಿರ್ವಿಕಾರದ ಸಾವು

-ಪ್ರವರ ಕೊಟ್ಟೂ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ