ಇರುವೆ ಮುತ್ತಿಕೊಂಡ ಕೇರಿಹಾವು

ನನ್ನ ಜನಗಳಿಗೆ
ಬಿಸಿಲು ತಾಕುವುದೇ ಇಲ್ಲ;
ಎಂಟು ಲಕ್ಷ ಕಿಲೋಮೀಟರುಗಳ
ದಾಟಿ ಬಂದ ಸೂರ್ಯನ ಬಾಹುಗಳಿಗೆ
ಅವಿರತ ಸೋಲು;
ಕಪ್ಪು ಚಮುಡದ ಹೊದಿಕೆಯ ಮೇಲಡರಿದ್ದ
ಬೆವರನ್ನು ಸೀಳಿ ತಾಕುವುದೆಂದರೆ
ಅಸಾಧ್ಯದ ಮಾತು,

ವೇದೊಪನಿಷತ್ತುಗಳ ಅಂಡುಗಳ ಮೇಲೆ
ಬರೆ ಇಡುತಿದ್ದರೆ,
ಜನಿವಾರಗಳ ಹೋಮ,
ಹಣೆ-ಎದೆಗಳ ಮೇಲೆ ಒಂದೇ ಒಂದು ಹನಿ
ಬೆವರು ಕೀಳುವುದಿಲ್ಲ,
ಬೆಂಕಿಗೆ ತುಪ್ಪ ಬೀಳುತಿದ್ದಂತೆ
ಧಗ ಧಗ,

ಗುಹೆಯಂತ ಗರ್ಭಗುಡಿಯೊಳ
ನೀರವ ಮೌನದ ನಡುವೆ
ದೇವರಿಗೆ ಕಣ್ಣು ಕಾಣುವುದಿಲ್ಲ,
ಬೆಳಕು ತೂರಲೆಂದು ಅಂಗುಲದಷ್ಟು
ತೂತು ಕೊರೆದಿದ್ದಾರೆ,
ಒಣಗಿದ ಹೂವು, ನೈವೇಧ್ಯಕ್ಕಿಟಿದ್ದ
ಹಿಡಿ ಅನ್ನ

ಬೇಲಿ ದಾಟದಂತೆ ಬೆಳೆದ
ಬಳ್ಳಿಯಲ್ಲಿ ಅದೇ ತಾನೆ ಅರಳಿದ
ಶಂಕುಹೂವು,
ಇರುವೆ ಮುತ್ತಿಕೊಂಡ
ಕೇರಿಹಾವು,
ಊರಹಾದಿಯಗುಂಟ ನಗ್ನ ತಮಟೆಯ ಸದ್ದು,
ಗುಲಗಂಜಿ ತೂಕದ ಗೌಡಿಕೆಯ ಕುರ್ಚಿ,

ಕುಣಿಕಿ ಚೀಲದಲ್ಲಿದ್ದ ಮೊಬೈಲಿಗೆ
ಎರಡು ಕಡ್ಡಿ ಸಿಗ್ನಲ್ಲು ಸಿಕ್ಕಿತಾದರೂ,
ಮೊಲೆಹಾಲು ಉಣುತಿದ್ದ ಹಸುಗೂಸ
ಗುಡಿಸಲಿಗೆ
ಬೆಳಕು ಮಾತ್ರ ಅಲೆಯಲಿಲ್ಲ,
ಚಿಮೆಣ್ಣಿ ಬುಡ್ಡಿಯೊಳಗಿಂದ
ಮಿಣುಕಾಡುವ ಬೆಂಕಿ ತಣ್ಣಗಿನ ಕ್ರೌರ್ಯ,
ಜೋತು ಬಿದ್ದ ಜೋಪಡಿಗೆ ತೂಕಡಿಕೆಯ ಸಾವು.

-ಪ್ರವರ ಕೊಟ್ಟೂರು

Comments

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ